ಉದರಶೂಲೆ
	ಮೇಲಿಂದ ಮೇಲೆ ಉದರದಲ್ಲಿ ಎಲ್ಲಾದರೂ ಒಂದೆಡೆ ಒಂದು ಒಳಾಂಗದ ಸಂಬಂಧವಾಗಿ ಕಾಣಿಸಿಕೊಳ್ಳುವ ಜೋರಾಗಿರುವ ನೋವು (ಕಾಲಿಕ್). ಯಾವುದಾದರೂ ಪೊಳ್ಳಾದ ಒಳಾಂಗದ ನಾಳದ ಕಂಡಿಯ ಅಗಲ ತುಸು ಹೆಚ್ಚು ಕಡಿಮೆಯಾಗಿ ಆತಂಕವಾದಾಗ ಅದರ ಸ್ನಾಯು ಗೋಡೆಗಳು ಸದ್ಯಕ್ಕೊ ಬಹಳ ಹೊತ್ತೊ ಬಲವಂತದಿಂದ ಕುಗ್ಗುವುದರಿಂದ ಏಳುವ ನೋವಿಗೆ ಬಲು ಮಟ್ಟಿಗೆ ಈ ಹೆಸರನ್ನು ಕೊಡುವುದುಂಟು. ಜಠರ, ಕರುಳು, ಕಂಕೋಶ (ಬ್ಲಾಡರ್), ಪಿತ್ತಕೋಶಗಳಲ್ಲಿ ಹೀಗಾಗುವುದು ಸಾಮಾನ್ಯ. ಆಮಶಂಕೆ, ಮತ್ತಿತರ ಕಾರಣಗಳಿಂದಾಗುವ ಕರುಳುರಿತದಲ್ಲಿ (ಎಂಟರೈಟಿಸ್) ಹೊಟ್ಟೆ ನುಲಿತವಾಗಿ ತೋರುವುದು. ಸೀಸದ ವಿಷವೇರಿಕೆಯಲ್ಲೂ ಸಾಮಾನ್ಯ. ಬುಡ್ಡಿಹಾಲು ಕುಡಿವ ಕೂಸುಗಳಲ್ಲಿ ಅಜೀರ್ಣವಾದಾಗ ಈ ಶೂಲೆ ಕಾಣಿಸಿಕೊಂಡು ತುಂಬ ರಂಪವಾಗುತ್ತದೆ. ಕಾಲುಗಳನ್ನು ಮುದುರಿಕೊಂಡು ಕೂಸು ತಳಮಳಗುಟ್ಟುತ್ತ ರಚ್ಚೆಹಿಡಿದು ಒಂದೇ ಸಮನೆ ಕಿಟಾರನೆ ಕಿರಲುತ್ತಿರುವುದು. ಉದರಶೂಲೆಗೆ ಕಾರಣವಾದ ರೋಗಗಳಿಗೆ ತಕ್ಕ ಚಿಕಿತ್ಸೆಯಾದರೆ ಶೂಲೆ ಅಣಗುತ್ತದೆ.
 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

(ನೋಡಿ- ಪಿತ್ತಕೋಶ)					 					 
(ಕೆ.ಆರ್.ಎ.)